ಡಾ.ಎಸ್.ರಾಮಲಿಂಗೇಶ್ವರ
ಡಾ.ಎಸ್.ರಾಮಲಿಂಗೇಶ್ವರ ರವರ ಜೀವನ ಚರಿತ್ರೆ
"ಶ್ರೇಷ್ಠ ಸಾಹಿತ್ಯದ ಸಂಘಟಕ , ಅಪರೂಪದ ಸಾಂಸ್ಕೃತಿಕ ಪರಿಚಾರಕ ,ನಾಡು ನುಡಿ ಸೇವಕ ಡಾ. ರಾಮಲิงೇಶ್ವರ (ಸಿಸಿರಾ)"
"ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಗಿಂತಲೂ ಮಿಗಿಲು" ಎಂಬ ನುಡಿಯಂತೆ ಬಹಳಷ್ಟು ಮಹನೀಯರು ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಅಹರ್ನಿಶಿಯಾಗಿ ದುಡಿಯುತ್ತ ಕನ್ನಡಮ್ಮನ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ .'ಕನ್ನಡಕ್ಕಾಗಿ ಕೈಯೆತ್ತು ನಿನ್ನಕೈ ಕಲ್ಪವೃಕ್ಷವಾಗುತ್ತದೆ , ಕನ್ನಡಕ್ಕಾಗಿ ಧ್ವನಿ ಎತ್ತು ನಿನ್ನ ಕೊರಳು ಪಾಂಚಜನ್ಯ ವಾಗುವುದು' ಎಂಬ ಕುವೆಂಪುರವರ ವಾಣಿಯಂತೆ ತಮ್ಮ ಜೀವಿತಾವಧಿಯನ್ನು ಕನ್ನಡ ಮಾತೆಯ ರಕ್ಷಣೆಗೆ, ಕನ್ನಡ ಅಭಿವೃದ್ಧಿಗೆ, ಭಾಷೆಯ ಏಳಿಗೆಗೆ ಮೀಸಲಿಟ್ಟು ಕನ್ನಡ ಉಪನ್ಯಾಸಕರಾಗಿ , ಸಾಹಿತಿಗಳಾಗಿ , ಸಂಘಟಕರಾಗಿ , ಪ್ರಕಾಶಕರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡಪರ ಕೆಲಸಗಳನ್ನು ಬಹಳ ಮುತುವರ್ಜಿಯಿಂದ ಮಾಡಿಕೊಂಡು ಬರುತ್ತಿರುವ ಅಪರೂಪದ ನಿಸ್ವಾರ್ಥ ಕನ್ನಡಮ್ಮನ ಸೇವಕರಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಿದ್ದನಹಳ್ಳಿ ಗ್ರಾಮದ ಡಾ.ರಾಮಲಿಂಗೇಶ್ವರ (ಸಿಸಿರಾ) ರವರು ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿಯಾಗಿದ್ದಾರೆ. ಇಂತಹ ಅಪರೂಪದ ವ್ಯಕ್ತಿ, ಶಕ್ತಿ ಡಾ.ರಾಮಲಿಂಗೇಶ್ವರ ಅವರ ಬದುಕಿನ ಸಾಧನೆಯ ಹೆಜ್ಜೆ ಗುರುತುಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನವಾಗಿದೆ .
*ಸಿಸಿರಾ ರವರ ಬಾಲ್ಯ- ವಿದ್ಯಾಭ್ಯಾಸ :-
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದ ಸಿದ್ದೇಗೌಡ, ಪದ್ಮಮ್ಮ ದಂಪತಿಗಳ ಸುಪುತ್ರರಾಗಿ ರೈತಾಪಿ ಕುಟುಂಬದಲ್ಲಿ 05-04-1973 ರಲ್ಲಿ ಜನಿಸಿದ ಡಾ. ಎಸ್. ರಾಮಲಿಂಗೇಶ್ವರ ರವರು ಕನ್ನಡಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ಅಪ್ರತಿಮ ಕನ್ನಡ ನಾಡು ನುಡಿ ಸೇವಕರಲ್ಲಿ ಒಬ್ಬರೆನಿಸಿದ್ದಾರೆ .ಶ್ರೀಯುತರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಿದ್ದನಹಳ್ಳಿ ಗ್ರಾಮದಲ್ಲಿ ಮುಗಿಸಿ, ಪ್ರೌಢ ವಿದ್ಯಾಭ್ಯಾಸವನ್ನು ಬೇವೂರಿನ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮುಗಿಸಿ , ನಂತರದಲ್ಲಿ ಚನ್ನಪಟ್ಟಣದಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ .ಎ ಕನ್ನಡ ಪದವಿ ಪಡೆದುಕೊಂಡು ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು .ಬೆಂಗಳೂರಿನ ಪ್ರತಿಷ್ಟಿತ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿ ಕಳೆದ 20 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ . ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಶ್ರೀಯುತರು ತಮ್ಮ ಸೃಜನಶೀಲ ಬೋಧನೆಯ ಮೂಲಕ ವಿದ್ಯಾರ್ಥಿಗಳಿಗೆ ಗುಣಾತ್ಮಕ ಕಲಿಕೆ ಉಂಟುಮಾಡುತ್ತಾ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಂತೆ ಪ್ರೇರೇಪಿಸುತ್ತಿದ್ದಾರೆ .
*ಸಾಂಸ್ಕೃತಿಕ ಸಂಘಟಕ ರಾಗಿ ರಾಮಲಿಂಗೇಶ್ವರ:-
ಸಿಸಿರಾ ಸದಾ ಕ್ರಿಯಾಶೀಲ ವ್ಯಕ್ತಿ. ಹಲವಾರು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಬಹುಮುಖ ವ್ಯಕ್ತಿತ್ವದ ವ್ಯಕ್ತಿ.ಕನ್ನಡವೇ ನನ್ನುಸಿರು ಎಂದು ಭಾವಿಸಿ ಕನ್ನಡಕ್ಕಾಗಿ ತನು, ಮನ, ಧನ ಅರ್ಪಿಸುವ ಮನೋಭಾವವುಳ್ಳ ಅಪ್ರತಿಮ ಸಾಂಸ್ಕೃತಿಕ ಪರಿಚಾರಕ . ಕನ್ನಡ ನಾಡು, ನುಡಿ ಸೇವೆ ಮಾಡಬೇಕೆಂಬ ಹಂಬಲದಿಂದ 1996 ರಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಪ್ರಗತಿಪರ, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ಪ್ರತಿಭಾ ಪುರಸ್ಕಾರದಂತಹ ಸಾವಿರಾರು ಕಾರ್ಯಕ್ರಮಗಳನ್ನು ಕಳೆದ 25 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದ್ದಾರೆ,ಟ್ರಸ್ಟ್ ನ ಮುಖಾಂತರ ಸಮಾಜ ಸುಧಾರಕರ ವಿಚಾರಧಾರೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ತಮ್ಮನ್ನು ಅಹರ್ನಿಶಿ ತೊಡಗಿಸಿಕೊಂಡಿದ್ದಾರೆ. ಇವರು ರಾಜ್ಯಾದ್ಯಂತ ಸಂಚರಿಸಿ ವಿವಿಧ ಸಂಘಸಂಸ್ಥೆಗಳು ಕರದ ಗೋಷ್ಠಿಗಳಲ್ಲಿ ,ವಿಚಾರ ಸಂಕಿರಣಗಳಲ್ಲಿ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಮ್ಮ ವಿದ್ವತ್ಪೂರ್ಣ ಭಾಷಣ ಮಾಡಿ ಜನರ ಗಮನ ಸೆಳೆದಿದ್ದಾರೆ .ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಂವಾದ, ವ್ಯಾಖ್ಯಾನಗಳನ್ನು ನೀಡಿದ್ದಾರೆ .ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಾಚಿಸಿದ್ದಾರೆ ಹಲವು ಕಾರ್ಯಕ್ರಮಗಳಲ್ಲಿ , ಸಮ್ಮೇಳನಗಳಲ್ಲಿ ಮುಖ್ಯತಿಥಿಗಳಾಗಿ, ಅಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ .ತಮ್ಮ ಸಂಸ್ಥೆಯ ಮೂಲಕ ಯುವ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಅಲ್ಲದೆ ತಮ್ಮ ಟ್ರಸ್ಟ್ ನ ಮುಖಾಂತರ ಪ್ರತಿವರ್ಷ ಕಾವ್ಯ ಕಮ್ಮಟ, ಕಥಾ ಕಮ್ಮಟ, ನಾಟಕ ರಚನಾ ಕಮ್ಮಟಗಳನ್ನು ಏರ್ಪಡಿಸಿ ಸಾಹಿತ್ಯ ಲೋಕವನ್ನು ಪ್ರವೇಶಿಸಬೇಕೆಂಬ ಯುವಕ ಯುವತಿಯರಿಗೆ ತರಬೇತಿ ನೀಡುತ್ತಾ ವೇದಿಕೆಯನ್ನು ನಿರ್ಮಿಸಿಕೊಂಡು ಬಂದಿದ್ದಾರೆ.ಹಲವಾರು ಹಿರಿಯ ಸಾಹಿತಿಗಳನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದಾರೆ ಅಲ್ಲದೆ ಲಕ್ಷಾಂತರ ರೂಪಾಯಿಗಳ ದತ್ತಿಗಳನ್ನು ಸಂಗ್ರಹಿಸಿ ಬಂದ ಹಣವನ್ನು ತಮ್ಮ ಟ್ರಸ್ಟ್ ನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಇಡಿಗಂಟಾಗಿ ಇಟ್ಟು ಬರುವ ಬಡ್ಡಿ ಹಣದಲ್ಲಿ ಹಲವಾರು ಉಪನ್ಯಾಸ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸಿಕೊಂಡು ಬಂದಿದ್ದಾರೆ .ಒಟ್ಟಾರೆ ರಾಮನಗರ , ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಹಾಸನ ,ಮಂಡ್ಯ, ಮೈಸೂರು ಹೀಗೆ ಹತ್ತಾರು ಜಿಲ್ಲೆಗಳಲ್ಲಿ ಹತ್ತಾರು ವರ್ಷಗಳಿಂದ ನಿಷ್ಕಲ್ಮಶ ಮನಸ್ಸಿನಿಂದ ಫಲಾಪೇಕ್ಷೆಯಿಲ್ಲದೆ ಸಾಹಿತ್ಯ, ಸಂಸ್ಕೃತಿ ,ನಾಡು ನುಡಿ ಕಟ್ಟುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ . ಕನ್ನಡ ಸಂಸ್ಕೃತಿ, ಸಾಹಿತ್ಯ ಸಂಘಟನೆ ಮೂಲಕ ಒಡೆದ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತಾ ಬಂದಿದ್ದಾರೆ .
ಜಿಲ್ಲಾ ಕಸಾಪ ಅಧ್ಯಕ್ಷರಾಗಿ ರಾಮಲಿಂಗೇಶ್ವರ
ಶ್ರೀಯುತರ ಸಾಹಿತ್ಯ ಸೇವೆ ನಿರಂತರವಾಗಿದ್ದು ಪ್ರಾರಂಭದಲ್ಲಿ ಚನ್ನಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಅತ್ಯುತ್ತಮ ಸಾಹಿತ್ಯ ಸೇವೆ ಮಾಡಿದ್ದಾರೆ .ನಂತರದಲ್ಲಿ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸುತ ರಾಮೇಗೌಡ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಅತ್ಯುತ್ತಮವಾಗಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ .ನಂತರದಲ್ಲಿ 2005 ರಿಂದ 2008 ನೇ ಇಸವಿ ವರೆಗೆ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿ 3 ವರ್ಷಗಳ ಕಾಲ ಅತ್ಯುತ್ತಮವಾಗಿ ಸಾಹಿತ್ಯದ ತೇರನ್ನು ಎಳೆದಿದ್ದಾರೆ .ಮನೆಯಂಗಳದಲ್ಲಿ ಸಾಹಿತ್ಯ ,ವಿಚಾರ ಸಂಕಿರಣ ,ಕವಿಗೋಷ್ಠಿ ,ಗೀತ ಗಾಯನ ಕಾರ್ಯಕ್ರಮಗಳನ್ನು, ಜಾನಪದ ಕಮ್ಮಟ, ಕಲಾಮೇಳಗಳು, ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಆಯೋಜಿಸಿ ಸಾಹಿತ್ಯವನ್ನು ಶಾಲಾ ಕಾಲೇಜುಗಳಿಗೆ, ಹಳ್ಳಿಹಳ್ಳಿಗಳಿಗೆ, ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಮಾಡಿದ್ದಾರೆ
ಸಮಾಜ ಸೇವಕರಾಗಿ ಸಿಸಿರಾ :-
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ .ಕೃಷ್ಣ ರವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಮಾಜಮುಖಿಯಾದ ಚಟುವಟಿಕೆಗಳನ್ನು ರಾಮಲಿಂಗೇಶ್ವರ ರವರು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಆಗಿ ಗಾಂಧಿ ಚಿಂತನೆಗಳನ್ನು ನಾಡಿನಾದ್ಯಂತ ಪರಿಚಯಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ, ಶಾಲಾ ಕಾಲೇಜುಗಳಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಗಾಂಧಿತತ್ವಗಳನ್ನು ಪ್ರಚುರಪಡಿಸುತ್ತಿದ್ದಾರೆ ,ಅಲ್ಲದೆ ಎನ್ನೆಸ್ಸೆಸ್ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗಳಲ್ಲಿ ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಗ್ರಾಮೀಣ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲಸಮಾಡುತ್ತಿದ್ದಾರೆ.ಯುವಜನೋತ್ಸವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದಾರೆ . ಇದಲ್ಲದೆ ಯುವ ಸಾಹಿತಿಗಳಿಗೆ ಪುಸ್ತಕ ಪ್ರಕಟಿಸಲು ಸಹಕಾರ ನೀಡುತ್ತಿದ್ದಾರೆ .ತಮ್ಮ ಬಿಬಿಜಿಎಸ್ ಟ್ರಸ್ಟ್ ಮುಖಾಂತರ ಬಡವರಿಗೆ, ಅಸಹಾಯಕರಿಗೆ ನೆರವಿನ ಸಹಾಯಹಸ್ತ ಚಾಚುತ್ತಾ ಬರುತ್ತಿದ್ದಾರೆ.ಅನೇಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಾಲಾಕಾಲೇಜು ಶುಲ್ಕ ಕಟ್ಟುವ ಮೂಲಕ ನೆರವಾಗಿದ್ದಾರೆ .
ಸಾಹಿತಿಯಾಗಿ ಸಿಸಿರಾ
ರಾಮಲಿಂಗೇಶ್ವರ ರವರು ಬಾಲ್ಯದಿಂದಲೇ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ವಿದ್ಯಾರ್ಥಿ ದಿಸೆಯಲ್ಲಿಯೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಸಾಹಿತಿಯಾಗಿ ಹಲವಾರು ಪುಸ್ತಕಗಳನ್ನು ಹೊರತಂದಿದ್ದಾರೆ .ಇವರ ಲೇಖನ ,ಕವನ, ಕಥೆ, ಜಾನಪದ ಸಂದರ್ಶನ ಇತ್ಯಾದಿ ಬರಹಗಳು ಪ್ರಸಿದ್ಧ ವಾರಪತ್ರಿಕೆ ,ಮಾಸಪತ್ರಿಕೆ ,ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ . ನಿರಂತರ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಚೈತ್ರ ಚಿತ್ತಾರ, ಪ್ರೇಮಗಂಗೆ, ತಾಯಿನಾಡು, ಸ್ವಾತಂತ್ರ್ಯಾನಂತರ, ನಿನ್ನ ಪ್ರೀತಿಯ ಹಿಂದೆ . ಸೋನೇಮಳೆ, ಮಕ್ಕಳ ಜಾನಪದ ಕಥೆಗಳು ,ಭೂಮಿ ತಬ್ಬಿದ ಆಕಾಶ ಮೊದಲಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಹತ್ತಾರು ಗ್ರಂಥಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸಿಸಿರಾ ಅವರು ಇತ್ತೀಚೆಗೆ ಕನ್ನಡ ಸಾಹಿತ್ಯದ ಬಗ್ಗೆ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಪಿಎಚ್‌ಡಿ ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ .
ಸಿಸಿರಾ ಅವರ ದಾಂಪತ್ಯ ಜೀವನ
ರಾಮಲಿಂಗೇಶ್ವರ ರವರು ಆದರ್ಶವಾದಿ,ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ , ಲೋಹಿಯಾ ತತ್ವಸಿದ್ಧಾಂತಗಳ ಬಗ್ಗೆ ಓದಿ ತಿಳಿದವರು . ಜೊತೆಗೆ ಅವುಗಳನ್ನು ಜೀವನದಲ್ಲಿ ತಕ್ಕಮಟ್ಟಿಗೆ ಅಳವಡಿಸಿಕೊಳ್ಳಲು ಪ್ರಯತ್ನ ಪಟ್ಟವರು.ಕೊಲ್ಲುವವನೇ ಮಾದಿಗ , ಹೊಲಸು ತಿನ್ನುವವನೇ ಹೊಲೆಯ ಎಂಬ ಬಸವಣ್ಣನವರ ನುಡಿಮುತ್ತಿನಂತೆ ಪ್ರಾಣಿ ಹಿಂಸೆ ಮಹಾಪಾಪ ಎಂದರಿತು ಮಾಂಸಾಹಾರ ತ್ಯಜಿಸಿ ಜೀವನಪೂರ್ತಿ ಸಸ್ಯಾಹಾರ ಸೇವನೆಯನ್ನು ಮೈಗೂಡಿಸಿಕೊಂಡವರು . ವೈಚಾರಿಕತೆ ವೈಜ್ಞಾನಿಕತೆಯನ್ನು ಬಾಳ ಬುತ್ತಿಯನ್ನಾಗಿಸಿಕೊಂಡವರು .ಕುವೆಂಪು ಅವರ ಮಂತ್ರ ಮಾಂಗಲ್ಯ ಸಾಹಿತ್ಯದ ಆಶಯದಂತೆ ಹೇಮಾವತಿ ಎಂಬುವವರನ್ನು ಸರಳ ವಿವಾಹವಾಗಿ ಯುವ ತಲೆಮಾರಿನ ಜನತೆಗೆ ಆದರ್ಶವಾಗಿದ್ದಾರೆ.ಇಬ್ಬರು ಅವಳಿ ಗಂಡು ಮಕ್ಕಳಾದ ರೋಹನ್ ಮತ್ತು ರೋಹಿತ್ ರವರನ್ನು ಒಳಗೊಂಡ ಪುಟ್ಟ ಸಂಸಾರದೊಂದಿಗೆ ಆದರ್ಶ ದಾಂಪತ್ಯ ಜೀವನ ನಡೆಸುತ್ತಿದ್ದಾರೆ .
ಪುಸ್ತಕ ಪ್ರಕಾಶಕರಾಗಿ ಸಿಸಿರಾ
ತಮ್ಮ ಪತ್ನಿ ಹೇಮಾವತಿ ಹೆಸರಿನಲ್ಲಿ 'ಹೇಮಾವತಿ ಪುಸ್ತಕ ಪ್ರಕಾಶನ ಸಂಸ್ಥೆ ' ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಕೃತಿರಚನೆ ಮಾಡಿ ಪುಸ್ತಕವನ್ನು ಹೊರತರಲು ಕಷ್ಟಪಡುತ್ತಿರುವ ರಾಜ್ಯದ ನಾನಾ ಮೂಲೆಗಳಲ್ಲಿ ನ ಯುವ ಬರಹಗಾರರ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಪ್ರಕಟಣೆ ಮಾಡಿಕೊಂಡು ಬರುತ್ತಿದ್ದಾರೆ .ಯುವ ಬರಹಗಾರರು ಬರೆದ ಪುಸ್ತಕಗಳಿಗೆ ಪ್ರತಿವರ್ಷ ದತ್ತಿ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಾರೆ.ಅಲ್ಲದೆ 'ನಮ್ಮ ಜನರ ವಾಣಿ ' ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕೂಡ ಕೆಲಸ ನಿರ್ವಹಿಸಿದ್ದಾರೆ .